ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಮಡಿಕೇರಿ: ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ ಆಚರಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ವಿಶಾಲ್ ಕುಮಾರ್, ತಹಶಿಲ್ದಾರರಾದ ರಮೇಶ್ ಬಾಬು ಅವರು ನಾಡಿನ ಸಾಂಸ್ಕೃತಿಕ ನಾಯಕ ಬಸವೇಶ್ವರರು ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವ ಗುರು ಬಸವಣ್ಣ ಅವರ ಚಿಂತನೆಗಳು ಸಾರ್ವಕಾಲಿಕ ಎಂದು ಬಣ್ಣಿಸಿದರು. 12 ನೇ ಶತಮಾನದಲ್ಲಿ ಕಾಯಕ ಜೀವಿಗಳ ಚಳುವಳಿಯ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ನಡೆಸಿ ವಚನಗಳ ಮೂಲಕ ಜಾಗೃತಿ ಮೂಡಿಸಿದರು ಎಂದರು. ಸಮಾಜದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಜಾಗೃತಿ ಮೂಡಿಸಿದರು. ಬಸವೇಶ್ವರರು ವಚನಗಳ ಮೂಲಕ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ವರ್ಣಿತ್ ನೇಗಿ ಅವರು ಹೇಳಿದರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸೇರಿದಂತೆ ಬಸವಾದಿ ಶರಣರು ವಚನಕಾರರ ಬಗ್ಗೆ ಅಧ್ಯಯನ ಮಾಡಬೇಕು. ಜೊತೆಗೆ ಸದಾ ಸ್ಮರಿಸಬೇಕು ಎಂದರು.

ಬಸವಣ್ಣನವರ ಸಾಮಾಜಿಕ ಸುಧಾರಣೆಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳು, ಚಿಂತನೆಗಳು ವಿಶ್ವಕ್ಕೆ ಮಾದರಿಯಾಗಿದೆ. ಭಾರತ ಸಂಸತ್ತಿನಲ್ಲಿ ಹಾಗೂ ಲಂಡನ್‍ನಲ್ಲಿ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸಿರುವುದೇ ಸಾಕ್ಷಿ ಎಂದರು.

ಬಸವೇಶ್ವರರ ವಿಚಾರಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಜಿ.ಪಂ.ಸಿಇಒ ವಿವರಿಸಿದರು.
ಬಸವೇಶ್ವರರು ಕನ್ನಡ ನಾಡಿನ ಸಂಸ್ಕೃತಿ ಪ್ರತಿಪಾದಿಸಿದ ಮೌಲ್ಯಗಳ ರೂಪಕ. ವಚನಕಾರರ ಅನುಭವ ಮಂಟಪ ಇಂದಿನ ಪ್ರಜಾಪ್ರಭುತ್ವದ ಅಡಿಗಲ್ಲೇ ಆಗಿದೆ. ನಾಡಿನ ಸಾಂಸ್ಕೃತಿಕ, ಸಾಹಿತ್ಯಕ, ಪರಂಪರೆ ವಿಶ್ವಕ್ಕೆ ಕೊಡುಗೆ ನೀಡಿರುವ ವಿಶ್ವ ಮಾನವ ಪರಂಪರೆಯ ಬಹುಮುಖ್ಯವಾದ ಕೊಂಡಿಯಾಗಿದ್ದಾರೆ ಎಂದು ನುಡಿದರು.

ಕಾಯಕವೇ ಕೈಲಾಸವೆಂದು ಒತ್ತಿ ಹೇಳಿದ್ದಾರೆ. ಅನುಭವ ಮಂಟಪದ ಮೂಲಕ ಎಲ್ಲರನ್ನು ಒಳಗೊಂಡ ಕಲ್ಯಾಣ ಕ್ರಾಂತಿ ಉಂಟು ಮಾಡಿದರು ಎಂದು ವರ್ಣಿತ್ ನೇಗಿ ಅವರು ಹೇಳಿದರು.

ಹನ್ನೆರಡನೇ ಶತಮಾನದಲ್ಲಿ ಬಸವೇಶ್ವರರು ಸಾಮಾಜಿಕ ಪರಿವರ್ತನೆ ಮಾಡಿ, ಸಮಾಜದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಆ ದಿಸೆಯಲ್ಲಿ ವಿಶ್ವಜ್ಞಾನಿ, ಜಗದ ಜ್ಯೋತಿ ಬಸವೇಶ್ವರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ವರ್ಣಿಸಿದರು.

ಬಸವೇಶ್ವರರು ನಾಡಿನ ಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಎಲ್ಲರಿಗೂ ಅರ್ಥವಾಗುವಂತೆ ಮತ್ತು ಹತ್ತಿರವಾಗುವಂತೆ ಸಾಮಾಜಿಕ ಸಂದೇಶಗಳನ್ನು ನೀಡಿದ್ದರು ಎಂದು ಅವರು ವಿವರಿಸಿದರು. ‘ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲ ಸಂಗಮನೊಲಿಸುವ ಪರಿ’ ಎಂದು ಬಸವಣ್ಣ ಅವರು ತಿಳಿಸಿದ್ದಾರೆ ಎಂದರು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಮಾತನಾಡಿ ಬಸವೇಶ್ವರರು ಅನೇಕ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು, ಆ ನಿಟ್ಟಿನಲ್ಲಿ ಬಸವೇಶ್ವರರ ಆದರ್ಶಗಳು ಇಂದಿಗೂ ದಾರಿದೀಪವಾಗಿವೆ ಎಂದರು.

ಅಜ್ಞಾನದ ಕಾಲದಲ್ಲಿ ಜ್ಯೋತಿ ಆಗಿ ಕಾಣಿಸಿಕೊಂಡ ಬಸವೇಶ್ವರರು, ಸ್ತ್ರೀಯರಿಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಒತ್ತು ನೀಡಿದರು ಎಂದು ನುಡಿದರು.

Font Awesome Icons

Leave a Reply

Your email address will not be published. Required fields are marked *