ಮೈಸೂರು ಜಿಲ್ಲೆಯಲ್ಲಿ ಶೇ.75ರಷ್ಟು ಮಳೆ ಕೊರತೆ

ಮೈಸೂರು: ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದೇ ಶೇ.75ರಷ್ಟು ಮಳೆ  ಕೊರತೆಯಾಗಿರುವುದು ಕಂಡು ಬಂದಿದೆ.

ಇದರಿಂದ ಕೃಷಿ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರಿದೆ. ಮೈಸೂರು ಜಿಲ್ಲೆಯಲ್ಲಿ ಪೂರ್ವ ಮುಂಗಾರು ವೇಳೆ ಬರೋಬ್ಬರಿ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಡೆಯಬೇಕಿದ್ದ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ತೋಟಗಾರಿಕೆ ಬೆಳೆಗಳ ಇಳುವರಿಯೊಂದಿಗೆ ಕೃಷಿ ಚಟುವಟಿಕೆಯ ಬಿತ್ತನೆ ಕಾರ್ಯದ ಮೇಲೂ ಪರಿಣಾಮ ಬೀರಿದ್ದು, ತರಕಾರಿ ಮತ್ತು ಸೊಪ್ಪು  ಬೆಳೆಯ ಪ್ರಮಾಣ ಕುಸಿತಗೊಂಡಿದೆ.

ಕಳೆದ ಜನವರಿಯಿಂದ ಇದುವರೆಗೂ ಮೈಸೂರು ಜಿಲ್ಲೆಯಲ್ಲಿ ವಾಡಿಕೆಯಂತೆ 85 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 21 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ಶೇ 75ರಷ್ಟು ಮಳೆ ಕೊರತೆಯಾಗಿದೆ. ದಾಖಲೆ ಪ್ರಮಾಣದಲ್ಲಿ  ಏರಿಕೆಯಾಗುತ್ತಿರುವ ತಾಪಮಾನ, ಅಂತರ್ಜಲ ಮಟ್ಟ ಕುಸಿತದ ನಡುವೆ ಮಳೆಯ ಕೊರತೆಯು ಕೃಷಿಯ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರಿದೆ.

ರೈತರನ್ನು ಕೃಷಿಯಿಂದ ವಿಮುಖರನ್ನಾಗಿಸಿದೆ. ತೋಟಗಾರಿಕೆ ಬೆಳೆಗಳನ್ನು ನಂಬಿಕೊಂಡಿದ್ದ ರೈತರು, ಕಣ್ಣೆದುರೇ ಬೆಳೆ ಒಣಗುತ್ತಿರುವುದನ್ನು ನೋಡುತ್ತಿದ್ದಾರೆ. ಇನ್ನು ಮತ್ತೊಂದೆಡೆ ಕಳೆದ ಒಂದು ತಿಂಗಳಿಂದ ಬಿತ್ತನೆ ಕಾರ್ಯಕ್ಕೆ ಕಾಯುತ್ತಿದ್ದ ರೈತರಿಗೆ ಮಳೆರಾಯ ಕೃಪೆ ತೋರದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ನಡೆಸದೆ ಸುಮ್ಮನಾಗಿದ್ದಾರೆ.

ಅಂತರ್ಜಲವನ್ನೇ ನಂಬಿಕೊಂಡು ತರಕಾರಿ ಬೆಳೆಯುತ್ತಿದ್ದ ರೈತರು, ಈಗ ಬೋರ್‌ವೆಲ್‌ನಲ್ಲಿ ನೀರಿನ ಪ್ರಮಾಣ  ಕಡಿಮೆಯಾಗುತ್ತಿರುವುದರಿಂದ ಕಡಿಮೆ ಪ್ರದೇಶದಲ್ಲಿ ತರಕಾರಿ ಬೆಳೆಯುತ್ತಿದ್ದು, ತರಕಾರಿ ಮತ್ತು ಸೊಪ್ಪಿನ ಬೆಲೆ ಗಗನಕ್ಕೆ ಏರುವಂತಾಗಿದೆ. ಮೈಸೂರು ಜಿಲ್ಲೆಯಲ್ಲಿ 58ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಬೇಕಿತ್ತು. ಮಳೆಯ ಕೊರತೆಯಿಂದಾಗಿ ಸ್ಥಗಿತಗೊಂಡಿದೆ. ಈ ಸಂದರ್ಭದಲ್ಲಿ ಹತ್ತಿ, ಹೊಗೆ ಸೊಪ್ಪು, ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯ  ನಡೆಸಲು ರೈತರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮಳೆಯಾಗದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯದಲ್ಲಿ ವಿಳಂಬವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.

ಮಳೆಯ ಕೊರತೆಯು ತೋಟಗಾರಿಕೆ ಬೆಳೆಗಳ ಮೇಲೂ ಪರಿಣಾಮ ಬೀರಿದೆ. ಮಾವಿನ ಇಳುವರಿ ಕಡಿಮೆಯಾಗಲಿದ್ದು,  ನಿರೀಕ್ಷಿತ ಪ್ರಮಾಣದಲ್ಲಿ ಮಾವು ಬೆಳೆ ಬರಲು ಸಾಧ್ಯವಾಗುವುದಿಲ್ಲ. ತೋಟಗಾರಿಕೆ ಬೆಳೆಗಳ ಇಳುವರಿ ಕಡಿಮೆಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *