ರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಅಯೋಧ್ಯೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ದೇಶಾದ್ಯಂತ ಸಾಲು ರ‍್ಯಾಲಿಗಳ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ತೆರಳಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಕಳೆದ ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ್ದ ನರೇಂದ್ರ ಮೋದಿ ಅವರೀಗ ಮತ್ತೆ ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇದೇ ವೇಳೆ ಅವರು ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸುವ ಜತೆಗೆ ದೀರ್ಘದಂಡ ನಮಸ್ಕಾರ ಹಾಕಿದರು.

ರಾಮನಗರಿ ಅಯೋಧ್ಯೆಯಲ್ಲಿ ಭರ್ಜರಿ ರೋಡ್‌ ಶೋ ಕೈಗೊಳ್ಳುವ ಮೊದಲು ಮೋದಿ ಅವರು ರಾಮಲಲ್ಲಾನಿಗೆ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಮಮಂದಿರದ ಸುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಅಯೋಧ್ಯೆ ಭೇಟಿ ನೀಡುವ ಮೊದಲು ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ದೌರಾಹ್ರ ಲೋಕಸಭೆ ಕ್ಷೇತ್ರದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡರು.ರಾಮಲಲ್ಲಾ ದರ್ಶನದ ಬಳಿಕ ಮೋದಿ ಅವರು ಅಯೋಧ್ಯೆಯಲ್ಲಿ ಸುಮಾರು ಎರಡು ಕಿಲೋಮೀಟರ್‌ವರೆಗೆ ರೋಡ್‌ ಶೋ ನಡೆಸಿದರು. ಮಾರ್ಗದುದ್ದಕ್ಕೂ ನೆರೆದಿದ್ದ ಜನ ಹೂಮಳೆ ಸುರಿಸಿ ಅಭಿಮಾನ ಮೆರೆದರು.

ರೋಡ್‌ ಶೋಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕೂಡ ಸಾಥ್‌ ನೀಡಿದ್ದಾರೆ. ಇನ್ನು, ರೋಡ್‌ ಶೋ ಉದ್ದಕ್ಕೂ ಜನ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು.

Font Awesome Icons

Leave a Reply

Your email address will not be published. Required fields are marked *