ಸಿಎಂ ಆರೋಪ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಗೋಕಾಕ್: ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯತೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಜನರು ಗಮನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚುಸ್ಥಾನ ದೊರಕಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‌

ʼಕಾಂಗ್ರೆಸ್ ಪರ ನಿರೀಕ್ಷೆಗೂ ಮೀರಿ ಜನಬೆಂಬಲ ಕಂಡುಬರುತ್ತಿದೆ. ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಗ್ಯಾರಂಟಿ ಯೋಜನೆಗಳು ಪ್ರತಿ ಮನೆಯನ್ನು ತಲುಪಿವೆʼ ಎಂದು ಗೋಕಾಕ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಹೇಳಿದರು. ಈ ವೇಳೆ ಮೋದಿಯನ್ನು ಟೀಕಿಸಿದ ಅವರು, ಅವರು 2014 ಹಾಗೂ 2019ರಲ್ಲಿ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಇದು ಈ ಚುನಾವಣೆಯ ಟ್ರಂಪ್ ಕಾರ್ಡ್ ಎಂದರು.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಧಾನಿ ಇದರ ಬಗ್ಗೆ ತುಟಿ ಬಿಚ್ಚಿದ್ದಾರ? ಕೇಂದ್ರ ಬಿಜೆಪಿ ಸರ್ಕಾರ ಏನು ಕ್ರಮ ಕೈಗೊಂಡಿದೆ? ಅಮಿತ್ ಶಾ ಗೃಹ ಸಚಿವರಾಗಿ ವಿಫಲವಾದಂತೆ ಅಲ್ವಾ? ಮಣಿಪುರ ಹಿಂಸಾಚಾರಕ್ಕೆ ಮೋದಿ ಹೊಣೆಯಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೇವಲ ರಾಜಕಾರಣಕ್ಕಾಗಿ ಹಾಗೂ ಮತಗಳಿಕೆಗಾಗಿ ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿದ ಸುಳ್ಳು ಹೇಳುತ್ತಾರೆ ಎಂದ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷ ಕಳೆದ ಐದು ದಶಕಗಳಿಂದ ದೇಶದಲ್ಲಿ ಅಧಿಕಾರದಲ್ಲಿತ್ತು, ಎಂದಾದರೂ ಮಹಿಳೆಯರ ತಾಳಿಗಳನ್ನು ಕಸಿದುಕೊಂಡಿದ್ದಾರಾ? ದೇಶದ ಜವಾಬ್ದಾರಿಯುತ ಪ್ರಧಾನಿಯಾಗಿ ಇಂತಹ ಹೇಳಿಕೆಗಳನ್ನು ನೀಡಲು ಕಾರಣ ಅವರ ಸಾಧನೆಶೂನ್ಯ ಆಡಳಿತ. ಕೆಲಸ ಮಾಡಿದ್ದೇನೆ ಓಟು ಕೊಡಿ ಎನ್ನುವ ಬದಲು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿ ಓಟು ಕೇಳುತ್ತಾರೆ ಎಂದರೆ ನೀವೇ ಯೋಚಿಸಿ ಎಂದರು.

30 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗುತ್ತಿದೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಮುಸ್ಲಿಂಮರ 4% ಮೀಸಲಾತಿಯನ್ನು ರದ್ದು ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯ ಸುಪ್ರೀಂ ಕೋರ್ಟ್ ಗೆ ಹೋದಾಗ, 4% ಮೀಸಲಾತಿಯನ್ನು ಮುಂದುವರೆಸುವುದಾಗಿ ಅವರೇ ಮುಚ್ಚಳಿಕೆಯನ್ನು ಬರೆದುಕೊಟ್ಟಿದ್ದಾರೆ ಎಂದರು.

Font Awesome Icons

Leave a Reply

Your email address will not be published. Required fields are marked *