ರೈತ ಕಂಗಾಲು – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಸರಗೂರು: ಮಳೆಗಾಳಿಗೆ ಮುಸುಕಿನ ಜೋಳದ ಗಿಡಗಳು ನೆಲಕ್ಕುರುಳಿದ ಘಟನೆ ತಾಲ್ಲೂಕಿನ ಬಿ.ಮಟಕೆರೆ ಗ್ರಾಮದಲ್ಲಿ  ನಡೆದಿದೆ.

ಇದುವರೆಗೆ ಮಳೆಯಿಲ್ಲದೆ ಪರದಾಡಿದ ರೈತರು ಕೊಳವೆ ಬಾವಿಯ ನೀರಿನಲ್ಲಿ ಕೃಷಿ ಮಾಡಿದ್ದು, ಮಳೆ ಸುರಿದಿದ್ದರಿಂದ  ಕೃಷಿಗೆ ಅನುಕೂಲವಾಗುತ್ತದೆ ಎಂದು ಖುಷಿಪಡುವ ಹೊತ್ತಿನಲ್ಲಿ ಸುರಿದ ಗಾಳಿ ಮಳೆಗೆ ಕೃಷಿಫಸಲುಗಳು ನಾಶವಾಗಿವೆ.

ಬಾಡಿಗ ಗ್ರಾಮದ ವಾಸಿ ಮಹಿದ್ದಿನ್ ಪಾಶ ಬಿನ್ ಲೇಟ್ ಮಹಮದ್ ಆಲಿ ಅವರಿಗೆ ಸೇರಿದ ಕಂದಲಿಕೆ ಹೋಬಳಿ ಬಿ  ಮಟಕೆರೆ ಎಲ್ಲೆಯ ಸರ್ವೆ ನಂ 12/2 ರ 2 ಎಕರೆಯಲ್ಲಿ ಮುಸುಕಿನ ಜೋಳವನ್ನು ಬೆಳೆಯಲಾಗಿದ್ದು, ಗಿಡಗಳು ಹುಲುಸಾಗಿ ಬೆಳೆದು ಫಸಲು ಬಿಟ್ಟಿದ್ದವು. ಆದರೆ ಮಂಗಳವಾರ ಸಂಜೆ  ಸಮಯದಲ್ಲಿ ಬಿದ್ದ ಮಳೆ ಹಾಗೂ ಜೋರಾದ ಗಾಳಿಗೆ ಮುಸುಕಿನ ಜೋಳದ ಗಿಡಗಳು ನೆಲಕ್ಕುರುಳಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಈ ಸಂಬಂಧ ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿ ಪುಟ್ಟರಾಜು ಹಾಗೂ ಕೃಷಿ ಇಲಾಖೆಯ ಮಹೇಶ್ ಮತ್ತು ಸಿಬ್ಬಂದಿ  ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೆಳೆನಾಶದ ಅಂದಾಜು ಮೊತ್ತ ಸುಮಾರು ಒಂದೂವರೆ ಲಕ್ಷ ಎಂದು ಹೇಳಲಾಗಿದೆ. ಸದ್ಯ ರೈತ ಮಹಿದ್ದಿನ್ ಪಾಶ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

Font Awesome Icons

Leave a Reply

Your email address will not be published. Required fields are marked *