ಸಿದ್ದರಾಮಯ್ಯ ಅವರ ಗರ್ವಭಂಗ ಆಗಬೇಕು- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಗುಡುಗು. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

kannada t-shirts

ಬೆಂಗಳೂರು,ಮಾರ್ಚ್,29,2024 (www.justkannada.in):  ನರೇಂದ್ರ ಮೋದಿ ಅವರು ದುರ್ಬಲ ಪ್ರಧಾನಮಂತ್ರಿ, ನಾನು ಪ್ರಬಲ ಸಿಎಂ ಎಂದು ಕೊಚ್ಚಿಕೊಂಡ ಸಿದ್ದರಾಮಯ್ಯ ಅವರ ಗರ್ವಭಂಗ ಈ ಲೋಕಸಭೆ ಚುನಾವಣೆಯಲ್ಲಿ ಆಗಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಗುಡುಗಿದರು.

ಬೆಂಗಳೂರಿನಲ್ಲಿ ನಡೆದ ಜೆಡಿಎಸ್ – ಬಿಜೆಪಿ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ ದೇವೇಗೌಡರು,  ನರೇಂದ್ರ ಮೋದಿಯಂತಹ ಜಗಮೆಚ್ಚಿದ ನಾಯಕರ ಬಗ್ಗೆ ಲಘುವಾಗಿ ಮಾತನಾಡಿರುವ ಸಿದ್ದರಾಮಯ್ಯ ಅವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ, ಸಿದ್ದರಾಮಯ್ಯ ಗರ್ವಭಂಗ ಮಾಡಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿಟಿ ದೇವೇಗೌಡರಿಗೆ ನಿರ್ದೇಶನ ನೀಡಿದರು.

ಮೈಸೂರು ಚಾಮರಾಜನಗರ ಕ್ಷೇತ್ರ ಗೆಲ್ಲುವ ಶಕ್ತಿ ಜಿ.ಟಿ.ದೇವೇಗೌಡರಿಗೆ ಇದೆ. ಸಿದ್ದರಾಮಯ್ಯ ಅವರ ಗರ್ವಭಂಗ ಆಗಲೇಬೇಕು. ಅವರ ಗರ್ವಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕು ಎಂದು ವೇದಿಕೆಯಲ್ಲೇ ಜಿ.ಟಿ.ದೇವೇಗೌಡರಿಗೆ ಹೇಳಿದರು.

ಮೈತ್ರಿಯಲ್ಲಿ ಎಲ್ಲಿಯೂ ಒಂದು ಸಣ್ಣ ಸಮಸ್ಯೆಯೂ ಕಾಣಿಸಿಕೊಳ್ಳಬಾರದು. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೂ ಬಿಡದೇ ಹೋರಾಟ ಮಾಡೋಣ. ಒಂದು ರಾಜ್ಯದ ಸಿಎಂ ಗಟ್ಟಿಯಾಗಿರಬೇಕಂತೆ, ದೇಶದ ಪ್ರಧಾನಿ ಬಹಳ ವೀಕ್ ಅಂತೆ.. ಅಬ್ಬಾ..! ಪ್ರಧಾನಿ ವಿರುದ್ಧವೇ ಕೋರ್ಟಿಗೆ ಹೋಗಿದ್ದಾರೆ.. ಎಂಥಾ ಜನ ಇವರು ಎಂದು ದೇವೇಗೌಡರು ಕಿಡಿಕಾರಿದರು.

ಮನಮೋಹನ್ ಸಿಂಗ್ NO ಎಂದರು

ರೈತರ ಸಾಲದ ಮೇಲೆ ಬಡ್ಡಿ ಮನ್ನಾ ಮಾಡಿ ಎಂದು ಕೇಳಿದರೆ, ಮನಮೋಹನ್ ಸಿಂಗ್ ಅವರು NO ಎಂದರು. ಇದೆಲ್ಲಾ ಗೊತ್ತಿದ್ದರೂ ಸಿದ್ದರಾಮಯ್ಯ ಅವರೇ ಕೋರ್ಟಿಗೆ ಅರ್ಜಿ ಹಾಕ್ತೀರಾ? ಸ್ಟ್ರಾಂಗೆಸ್ಟ್ ಮುಖ್ಯಮಂತ್ರಿ, ವೀಕೆಸ್ಟ್ ಪ್ರಧಾನಮಂತ್ರಿ! ಇಂತಹ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿದ್ದಾರೆ. ಆ ಮಹಾನುಭಾವರಿಗೆ, ನಮೋ ನಮಃ ಎಂದು  ಹೆಚ್.ಡಿ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರು ಜೆಡಿಎಸ್ ಎಲ್ಲಿದೆ ಅಂತಾರೆ. ಅವರಿಗೆ ಅಧಿಕಾರದ ಮದ. ಆ ಮದ ಇಳಿಸುವ ಸಾಮರ್ಥ್ಯ 91ನೇ ವರ್ಷದ ಈ ದೇವೇಗೌಡನಿಗಿದೆ. ಯಾರ ಭಯಕ್ಕೂ ನಾನು ಅಂಜುವನಲ್ಲ. ಆ ಭಯ ಅನ್ನೋದೇ ನನಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಗುಡುಗಿದರು

ನನ್ನ ತಲೆ ಎನ್‌ಸೈಕ್ಲೋಪೀಡಿಯಾ. ಯಾವಾಗ, ಏನೆಲ್ಲಾ ಘಟನೆ ನಡೆದಿದೆ ಎಲ್ಲವನ್ನೂ ಹೇಳಬಲ್ಲೆ. ಯಡಿಯೂರಪ್ಪ ಅವರೇ ನನಗೆ ಎಲ್ಲಾ ಗೊತ್ತು ಎಂದ ಅವರು, ತುಮಕೂರಿಗೆ ಕಳಿಸಿ, ನನ್ನನ್ನೇ ಸೋಲಿಸಿದರು. ಕಾಂಗ್ರೆಸ್ ನವರು ಏನು ಮಾಡಿದರು ಎನ್ನುವುದು ಗೊತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಐಸಿಸಿಗೆ ಹಣ ಸಂದಾಯವಾಗುತ್ತಿದೆ

ಕಾಂಗ್ರೆಸ್ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪ ಮಾಡಿದ ಹೆಚ್.ಡಿ ದೇವೇಗೌಡರು,  28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಣ ಬಲವನ್ನು ನಾವು ಎದುರಿಸಬೇಕಿದೆ. ಹೊರ ರಾಜ್ಯಗಳಿಗೂ ಕಾಂಗ್ರೆಸ್ ನವರು ಹಣ ಸರಬರಾಜು ಮಾಡ್ತಿದ್ದಾರೆ. ರಾಜಸ್ಥಾನ, ತೆಲಾಂಗಣ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅಲ್ಲಿಗೆಲ್ಲ ರಾಜ್ಯದ ಹಣ ಹೋಗುತ್ತಿದೆ. ಕರ್ನಾಟಕದಿಂದ ಎಐಸಿಸಿಗೆ ಹಣ ಸಂದಾಯವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಎರಡು ಪಕ್ಷಗಳ ಸಮನ್ವಯ ಸಮಿತಿ ಸಭೆ ನಡೆಯುತ್ತಿರುವುದು ಸಂತೋಷದಾಯಕ. ಭಾರತ ಮಾತೆ ಹಾಗೂ ಶ್ಯಾಮ್ ಪ್ರಕಾಶ್ ಮುಖರ್ಜಿ,  ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಅರ್ಪಿಸಿ ವೇದಿಕೆಗೆ ಬಂದಿದ್ದೇನೆ. ರಾಜ್ಯ ಉಸ್ತುವಾರಿ ರಾಧಮೋಹನ್ ದಾಸ್ ಎಲ್ಲಾ ಕ್ಷೇತ್ರಗಳ ಮಾಹಿತಿ ಪಡೆದಿದ್ದಾರೆ. ಎಲ್ಲಾ ಮಾಹಿತಿಯನ್ನ ಬಿಜೆಪಿ ವರಿಷ್ಠರಿಗೆ ನೀಡ್ತಿದ್ದಾರೆ. ಎರಡು ಪಕ್ಷದಲ್ಲಿ ಸಮನ್ವಯ ಸಾಧಿಸಬೇಕು. ಯಡಿಯೂರಪ್ಪ ಅವರ ಪಾತ್ರ ಬಹಳ ಮುಖ್ಯವಾಗಿದೆ. ಸಮಯ ತುಂಬಾ ಕಡಿಮೆ ಇದೆ. ಹಿಂದೆ ಆದಂತಹ ವಿಚಾರಗಳನ್ನ ಮರೆತು ನಾವೆಲ್ಲಾ ಒಂದಾಗಬೇಕಿದೆ. ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದರು ಅವರು.

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರವಾಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಎರಡೂ ಪಕ್ಷಗಳ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು ಹಾಜರಿದ್ದರು.

Key words: Siddaramaiah, HD DeveGowda, JDS, BJP

website developers in mysore

Font Awesome Icons

Leave a Reply

Your email address will not be published. Required fields are marked *