ಏ. 23ರಂದು ಬಿಳಿಗಿರಿ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಚಾಮರಾಜನಗರ: ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ  ಏಪ್ರಿಲ್ 23ರಂದು ನಡೆಯಲಿದೆ.

ಈ ಸಂಬಂಧ ಅಗತ್ಯ ಪೂರ್ವ ಸಿದ್ದತೆಗಳ ಕುರಿತಂತೆ ಸಭೆ ನಡೆಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು  ಅಗತ್ಯ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬ್ರಹ್ಮರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ಹಿನ್ನಲೆಯಲ್ಲಿ  ದೇವಾಲಯದ ಆವರಣ, ರಥದ ಬೀದಿ, ಕಲ್ಯಾಣಿ ಕೊಳದ ಬಳಿ, ಕಮರಿ ಆವರಣ ಹಾಗೂ ದಾಸೋಹ ಆವರಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮತ್ತಿತ್ತರ ಜನನಿಬಿಡ ಸ್ಥಳಗಳಲ್ಲಿ ವಹಿಸಲಾಗುವ ಬಂದೋಬಸ್ತ್ ಕ್ರಮಗಳು ಸಮರ್ಪಕವಾಗಿರಬೇಕು.

ರಥೋತ್ಸವ ಸಿದ್ದತೆಗಳ ವ್ಯವಸ್ಥೆಯಲ್ಲಿ ಯಾವುದೇ ಲೋಪಗಳಿಗೆ ಆಸ್ಪದವಾಗದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಾರ್ಕಿಂಗ್ ಸ್ಥಳ ಸೇರಿದಂತೆ ಇತರೆಡೆ ರಾಜಕೀಯ ಪ್ರೇರಿತವಾದ  ಯಾವುದೇ ಬ್ಯಾನರ್, ಭಿತ್ತಿಪತ್ರಗಳ ಅಳವಡಿಕೆಗೆ ಅವಕಾಶ ನೀಡಬಾರದು. ಪ್ರವಾಸಿ ಮಂದಿರದಲ್ಲಿಯೂ ಸಹ ಯಾವುದೇ ರಾಜಕೀಯ ವ್ಯಕ್ತಿಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ರಥೋತ್ಸವ ಸಂದರ್ಭದಲ್ಲಿ ಭಕ್ತಾಧಿಗಳಿಗೆ ವಿತರಿಸುವ ಪಾನಕ, ಪ್ರಸಾದ ಹಂಚಿಕೆ ಹಾಗೂ ಅರವಟ್ಟಿಗೆ ವಿತರಣೆಗೆ ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳಿಂದ ಲಿಖಿತ ಅನುಮತಿ ಪತ್ರ ಪಡೆಯುವುದು ಕಡ್ಡಾಯವಾಗಿದೆ.

ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಏಪ್ರಿಲ್ 21ರಿಂದ 25ರವರೆಗೆ ಭಕ್ತಾಧಿಗಳು ಕ್ಷೇತ್ರಕ್ಕೆ ಹೋಗಿಬರಲು ಹೆಚ್ಚು ಸಂಖ್ಯೆಯಲ್ಲಿ ಕೆ.ಎಸ್.ಆರ್.ಟಿಸಿ ಬಸ್ಸುಗಳ ನಿಯೋಜನೆ ಮಾಡಬೇಕು. ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಸ್ವಚ್ಚತಾ  ಕಾರ್ಯಗಳಿಗೆ ವಿಶೇಷ ಗಮನ ಹರಿಸಬೇಕು. ಹಳ್ಳಗಳಿಂದ ಕೂಡಿದ ರಸ್ತೆಗಳನ್ನು ಗ್ರಾವೆಲ್ ತುಂಬಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಯಾವುದೇ ಪ್ಲಾಸ್ಟಿಕ್ ಉಪಯೋಗಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

Font Awesome Icons

Leave a Reply

Your email address will not be published. Required fields are marked *